ಹರಿ: ಓಂ:

ಕೆಂಗೇರಿ ಮೂಲ ಕ್ಷೇತ್ರದಲ್ಲಿ ಔದುಂಬರ ವೃಕ್ಷ ತನ್ನದೇ ಆದ ಮಹತ್ವ ಪಡೆದಿದೆ. ಅಲ್ಲದೆ ಇದು ಔಷಧಿ ಪೂರ್ಣ ಅಂತರ ಅರ್ಥ, ಲೋಕ ರೀತಿಯಲ್ಲಿ ಮಹತ್ವ ಪಡೆದಿದೆ. ವೇದ ವಿದ್ಯಾ ಪ್ರವೀಣರು ಮೇಧಾವಿಗಳಾದ ಮಹಿಮೋನ್ನತರೆ ಮಾರ್ತಾಂಡ ದೀಕ್ಷೀತರು, ಸೋಮಯಾಜಿಗಳು. ಅವರು ತಮ್ಮ ನಿಜಜಿವನದಲ್ಲಿ ಜಿಗುಪ್ಸೆಗೊಂಡು ಕಾಶಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಸನ್ಯಾಸ ಆಶ್ರಮ ಸ್ವೀಕಾರ ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡು, ಯೋಗ್ಯ ಗುರುಗಳನ್ನು ಹುಡುಕುತ್ತ, ಹುಬ್ಬಳ್ಳಿಯ ಕೃಷ್ಣೇಂದ್ರ ಸ್ವಾಮಿಗಳು, ಕೋಲ್ಹಾಪುರದ ಸ್ವಾಮಿಗಳು ಮತ್ತು ಮಾರ್ತಾಂಡ ದೀಕ್ಷೀತರು ಪ್ರಕಾಂಡ ಪಂಡಿತರಾದಂತಹ ಸ್ವಯಂ ಪ್ರಕಾಶ ಗುರುಗಳ ದರ್ಶನವಾಗುತ್ತದೆ. ಅವರ ಶಿಶ್ಯತ್ವವನ್ನು ವಹಿಸಿ ಸಂಪೂರ್ಣ ನ್ಯಾಯ, ಚತುರ್ವೇದ, 18 ಪುರಾಣ, ವೇದಾಂತಗಳ ಅಧ್ಯಯನ ಮತ್ತು ಧಾರ್ಮಿಕ ತತ್ವಗಳನ್ನು ಕಲಿಯುತ್ತಾರೆ. ಅದೆ ಸಮಯದಲ್ಲಿ ಸ್ವಯಂ ಪ್ರಕಾಶ ಗುರುಗಳ ಹತ್ತಿರ ಸಾವಿರಾರು ಶಿಶ್ಯರು ವೇದಾಧ್ಯಯನ ಮಾಡುತ್ತಿರುತ್ತಾರೆ. ಸ್ವಯಂ ಪ್ರಕಾಶ ಗುರುಗಳ ಮನಸ್ಸಿನಲ್ಲಿ ಒಂದು ಆಲೋಚನೆ ಬರುತ್ತದೆ, “ನನ್ನಲ್ಲಿ ಸಾವಿರಾರು ಶಿಶ್ಯರು ಇದ್ದಾರೆ, ಆದರೆ ನಿಜವಾದ ಶಿಶ್ಯರು ಯಾರೆಂಬ” ಪ್ರಶ್ನೆ ಉಂಟಾದಾಗ, ನಿಜ ಶಿಶ್ಯರುನ್ನು ಗುರುತಿಸುವುದರ ಸಲುವಾಗಿ ತಮ್ಮ ಬಲಗಾಲಿಗೆ ಹುಣ್ಣೊಂದನ್ನು ತಂದುಕೊಳ್ಳುತ್ತಾರೆ. ಆ ಹುಣ್ಣು ಸ್ವಲ್ಪ ಸಮಯದ ನಂತರ, ರಕ್ತ ಹೆಪ್ಪುಗಟ್ಟಿ ದುರ್ವಾಸನೆ ಪ್ರಾರಂಭವಾಗುತ್ತದೆ. ಅದೆ ಹೊತ್ತಿನಲ್ಲಿ ಎಲ್ಲ ಶಿಶ್ಯರು ರಾಜ ವೈದರನ್ನು ಕರೆದುತಂದು ಅನೇಕ ರೀತಿಯಲ್ಲಿ ಔಷಧೋಪಚಾರ ಮಾಡಿಸುತ್ತಾರೆ, ಆದರೆ ಯಾವುದು ಫಲಿಸುವುದಿಲ್ಲ. ಆಗ ಗುರುಗಳಲ್ಲಿ, ಎಲ್ಲ ಶಿಶ್ಯರು ಬಂದು ವಿನಂತಿ ಮಾಡುತ್ತಾರೆ, ಎಲ್ಲ ಉಪಚಾರ ಫಲಿಸದ ಸಮಯದಲ್ಲಿ ಮತ್ತಾವ ಉಪಾಯವಿದೆ ಎಂದು ಗುರುಗಳಲ್ಲಿ ಕೇಳಿಕೊಳ್ಳುತ್ತಾರೆ. ಆಗ ಗುರುಗಳು ನುಡಿಯುತ್ತಾರೆ, “ಈ ಖಾಯಿಲೆಯನ್ನು ತಮ್ಮನಾಲಿಗೆಯಿಂದ ಸ್ವಚ್ಚ ಮಾಡಬೇಕು!” ಎಂದಾಗ, ಶಿಶ್ಯರೆಲ್ಲ ನಾನೊಲ್ಲೆ, ತಾನೊಲ್ಲೆ, ಎಂದು ಹಿಂದಕ್ಕೆ ಸರಿಯುತ್ತಾರೆ, ಆದರೆ, ಹುಬ್ಬಳ್ಳಿಯ ಕೃಷ್ಣೇಂದ್ರ ಸ್ವಾಮಿಗಳು,ಕೋಲ್ಹಾಪುರದ ಸಿಧ್ಧೇಶ್ವರ ಸ್ವಾಮಿಗಳು ಮತ್ತು ಮಾರ್ತಾಂಡ ದೀಕ್ಷೀತರು ಈ ಮೂರು ಶಿಶ್ಯರು ಸೇವೆಯನ್ನು ಒಪ್ಪಿಕೊಂಡು, ತ್ರಿಕಾಲ ಸೇವೆಯನ್ನು ಸಪ್ತ ದಿನಗಳವರೆಗೆ ಮಾಡುತ್ತಾರೆ, ಅಂದರೆ, ಆ ಹುಣ್ಣನ್ನು ಪ್ರಾತ: ಕೃಷ್ಣೇಂದ್ರ ಸ್ವಾಮಿಗಳು, ಮಧ್ಯಾನ್ನ: ಕೋಲ್ಹಾಪುರದ ಸಿಧ್ಧೇಶ್ವರ ಸ್ವಾಮಿಗಳು ಮತ್ತು ಸಾಯಂ: ಮಾರ್ತಾಂಡ ದೀಕ್ಷೀತರು ಗುರುಸೇವೆಯನ್ನು ಮಾಡುತ್ತಾರೆ, ಆಗ, ಗುರುಗಳು ಈ ಗುರುಭಕ್ತಿಯನ್ನು ಮೆಚ್ಚಿ, ಪ್ರಸನ್ನಗೊಂಡು, ಹೇಳುತ್ತಾರೆ: “ನಿಮ್ಮ ಸೇವೆಯನ್ನು ಕಂಡು ನಾನು ಅತಿ ಪ್ರಸನ್ನ ನಾಗಿದ್ದೇನೆ, ಯಾವ ವರವನ್ನಾದರು ಬೇಡಿಕೊಳ್ಳಿ”, ಎಂದಾಗ, ಹುಬ್ಬಳ್ಳಿಯ ಕೃಷ್ಣೇಂದ್ರ ಸ್ವಾಮಿಗಳು ಮತ್ತು ಕೋಲ್ಹಾಪುರದ ಸಿಧ್ಧೇಶ್ವರ ಸ್ವಾಮಿಗಳು ಸನ್ಯಾಶ್ರಾಮ ಬೇಡಿಕೊಂಡರು, ಅದೇ ರೀತಿ ಆಶೀರ್ವಾದ ಪಡೆದುಕೊಂಡರು. ಮುಂದೆ ಮಾರ್ತಾಂಡ ದೀಕ್ಷೀತರು ಸಹ ಸನ್ಯಾಶ್ರಾಮ ಬೇಡಿಕೊಂಡರು ಆದರೆ ಭಗವದಿಚ್ಚೆ ಬೇರೆಯಾಗಿತ್ತು, ಗುರುಗಳು ಹೇಳಿದರು “ಮಾರ್ತಾಂಡ, ನಿನ್ನ ಮಗನಾಗಿ ಸಾಕ್ಷಾತ್ ಪರಮೇಶ್ವರನೇ ಜನಿಸುವನು, ಹಾಗಾಗಿ ನೀನು ಗೃಹಸ್ಥಾಶ್ರಮ ಸ್ವೀಕಾರ ಮಾಡು ಮತ್ತು ಭಾರತ ದೇಶದ, ದಕ್ಷಿಣದ ಕರ್ನಾಟಕ ಪ್ರದೇಶದಲ್ಲಿನ ಅರುಣತಟಾಕ ಕ್ಷೇತ್ರ ಗೋಚರವಾಗುತ್ತದೆ, ಅಲ್ಲಿ ನೀನು ಜಪ-ತಪ, ಸಂಸಾರಿಯಾಗಿ ಅಲ್ಲಿ ನೆಲೆಸು ಎಂದು ಆಶೀರ್ವದಿಸಿದರು”. ಗುರುಗಳು ಮಾರ್ತಾಂಡ ದೀಕ್ಷೀತರಿಗೆ ಈಶ್ವರ ಲಿಂಗ ಮತ್ತು ಕಾಶಿ ಗಂಗೆಯನ್ನು ಕೊಟ್ಟು ಸನ್ಮಾನ ಮಾಡಿ ಅವರ ಊರಾದ ಗೋಠೇಗೆ ಕಳುಹಿಸುತ್ತಾರೆ.
(*ಅರುಣತಟಾಕ ಕ್ಷೇತ್ರ - ಈಗಿನ ಅಮರಕಲ್ಯಾಣ ಅಂದರೆ ಕೆಂಗೇರಿ ಕ್ಷೇತ್ರ)

ಗೋಠೆಯಲ್ಲಿ ತಮ್ಮ ಅಜ್ಜ ನಾಗೇಶ ದೀಕ್ಷೀತರು, ತಂದೆ ತಿರುಮಲ ದೀಕ್ಷೀತರು, ಮತ್ತು ಮಾರ್ತಾಂಡ ದೀಕ್ಷೀತರ 3 ಜನ ತಮ್ಮಂದಿರು ಇದ್ದರು. ಅಲ್ಲಿಂದ ಮಾರ್ತಾಂಡ ದೀಕ್ಷೀತರು ತಮ್ಮ ಕೊನೆಯ ತಮ್ಮನಿಗೆ ಎಲ್ಲ ಆಸ್ಥಿಯನ್ನು ಕೊಟ್ಟು, ತಮ್ಮ ಮಧ್ಯದ ಇಬ್ಬರು ತಮ್ಮಂದಿರನ್ನು ಕರೆದುಕೊಂಡು ಬೆಡಸೂರಿಗೆ ಬಂದು ಅಲ್ಲಿ ಒಬ್ಬ ತಮ್ಮನ್ನು ವೇದಿಕ ಪರಂಪರೆಯನ್ನು ಮುಂದೆವರೆಸಲು ಬಿಟ್ಟು, ಇನ್ನೊಬ್ಬ ತಮ್ಮನನ್ನು ಮುನವಳ್ಳಿಯಲ್ಲಿ ವೇದಿಕ ಪರಂಪರೆಯನ್ನು ಮುಂದೆವರೆಸಲು ಬಿಟ್ಟು, ತಾವು ಮುರಗೋಡಕ್ಕೆ ಬರುತ್ತಾರೆ. ಅದೇ ಸಮಯದಲ್ಲಿ ಬೆಡಸೂರಿನ ಪಾಟೀಲರ ಮಗಳಾದ ಲಕ್ಷ್ಮೀಯೊಡನೆ ವಿವಾಹವಾಗುತ್ತದೆ. ಸಂಸಾರದ ಸಮಯದಲ್ಲಿ ಮಕ್ಕಳಾಗದೇ ಇರುವ ಕೊರಗು ಪ್ರಾರಂಭವಾಗುತ್ತದೆ. ಮಕ್ಕಳಾಗದೇ ಇರುವ ಉದ್ದೇಶವಿಟ್ಟುಕೊಂಡು ಗಾಯತ್ರೀ ಪುರಶ್ಚರಣ ಮಾಡುತ್ತಾರೆ. ಕೊನೆಯ ಪುರಶ್ಚರಣವನ್ನು ದೇವರಹಿಪ್ಪರಗಿಯಲ್ಲಿ ನೆರವೇರಿಸುತ್ತಾರೆ. ನಂತರ ಮಾರ್ತಾಂಡ ದೀಕ್ಷೀತರಿಗೆ ಒಂದು ದೃಷ್ಠಾಂತವಾಗುತ್ತದೆ, ಕುಲದೇವರಾದ ಮಾರ್ತಾಂಡ ಭೈರವ ಬಂದು ಹೇಳುತ್ತಾರೆ “ದಂಪತಿಗಳಿಬ್ಬರು ಆಕಾಶ ಚಿದಂಬರಕ್ಕೆಹೋಗಿ, 12 ವರುಷ ತಪಸ್ಸು ಮಾಡಿದ ನಂತರ ಸಾಕ್ಷಾತ್ ಪರಮೇಶ್ವರನೇ ಜನಿಸುವನು”, ಎಂಬ ವಾಣಿಯಂತೆ ದಂಪತಿಗಳಿಬ್ಬರು ಆಕಾಶ ಚಿದಂಬರಕ್ಕೆಹೋಗಿ, 12 ವರ್ಷ ಶಿವ ಪಂಚಾಕ್ಷರದ ಮೂಲ ಮಂತ್ರದಿಂದ ತ್ರಿಕಾಲ, ಘೋರ ತಪಶ್ಚರ್ಯ ಮಾಡುತ್ತಾರೆ. ಆ ತಪಶ್ಚರ್ಯಕ್ಕೆ ಮೆಚ್ಚಿ ಪರಮೇಶ್ವರ ಪ್ರತ್ಯಕ್ಷ ಗೊಂಡು, ಮಾರ್ತಾಂಡ ದೀಕ್ಷೀತರಿಗೆ ಇಛ್ಛೆಯನ್ನು ಕೇಳಲು ಹೇಳುತ್ತಾರೆ, ಆಗ ಮಾರ್ತಾಂಡ ದೀಕ್ಷೀತರು, “ಹೇ ಪರಮೇಶ್ವರಾ, ನಿನ್ನಲ್ಲಿ ಅಚಲವಾದ ಭಕ್ತಿಯನ್ನು ದಯಪಾಲಿಸೆಂದು ಕೇಳಿಕೊಳ್ಳುತ್ತಾರೆ”. ಆಗ ಪರಮೇಶ್ವರ ನುಡಿಯುತ್ತಾರೆ “ಭಕ್ತಾ, ನೀನು ಪುತ್ರ ಸಂತಾನ ಇಛ್ಛೆಯನ್ನು ಮರೆತೆಯೇನು?” ಎಂದಾಗ, ಮಾರ್ತಾಂಡ ದೀಕ್ಷೀತರು, “ಹೇ ಪರಮೇಶ್ವರಾ ನನಗೆ ನಿನ್ನಂತಹ ಪುತ್ರ ಬೇಕೆಂದಾಗ”, ಪರಮೇಶ್ವರ ನುಡಿಯುತ್ತಾರೆ “ ಚಿಂತಿಸಬೇಡಾ, ನಾನೇ ನಿನ್ನ ಮಗನಾಗಿ ಹುಟ್ಟಿ ಬರುತ್ತೇನೆಂದು” ಆಶೀರ್ವಾದ ಮಾಡುತ್ತಾರೆ, ಆಗ ಮಾರ್ತಾಂಡ ದೀಕ್ಷೀತರು, “ಹೇ ಪರಮೇಶ್ವರಾ ನಮಗೆ ನಿಮ್ಮ ಆಗಮನ ಹೇಗೆ ತಿಳಿಯುವುದು? ಎಂದು ಪ್ರಶ್ನಿಸಿದಾಗ, ಪರಮೇಶ್ವರರು ಹೇಳುತ್ತಾರೆ, “ನಾನು ಹುಟ್ಟಿದಾಗ ನನ್ನ ಬಲಗಿವಿಯಲ್ಲಿ ಬಿಲ್ವಪತ್ರಿಯನ್ನು ಮತ್ತು ಶುಭಾಕ್ಷತೆಗಳು ಕಾಣುತ್ತೀರಿ” ಎಂದು ಹೇಳಿದರು. ಅದೇ ರೀತಿ, ಮಾರ್ತಾಂಡ ದೀಕ್ಷೀತರು ಮತ್ತು ಲಕ್ಷ್ಮೀ ಮಾತೆಯರು ಅನುಷ್ಠಾನ ಮುಗಿಸಿ ಸ್ವಗ್ರಾಮಕ್ಕೆ ಬರುತ್ತಾರೆ. ನಂತರ ಲಕ್ಷ್ಮೀ ಮಾತೆ ಮಗುವನ್ನು ಪಡೆಯುತ್ತಾರೆ, ಮಗುವಿನ ಬಲಗಿವಿಯಲ್ಲಿ ಬಿಲ್ವಪತ್ರಿಯನ್ನು ಕಂಡು, ಹರುಷಗೊಳ್ಳುತ್ತಾರೆ. ಸ್ವಾಮಿ ಹುಟ್ಟಿದ ದಿವಸ ಶಕೆ 1680 ನೆ ಬಹುಧಾನ್ಯ ನಾಮ ಸಂವತ್ಸರದ ಕಾರ್ತಿಕ ಕೃಷ್ಣ ಷಷ್ಠಿ ಶುಭತಿಥಿಯಲ್ಲಿ, ಸೋಮವಾರದ ದಿವಸ ಆಗಿತ್ತು. ಹುಟ್ಟುತ್ತಲೆ ಸ್ವಾಮಿಗೆ 8 ವರ್ಷ, ಅದನ್ನು ಕಂಡು, ಮಾತಾ-ಪಿತೃಗಳು ಸ್ವಾಮಿಯಲ್ಲಿ ಬೇಡಿಕೊಳ್ಳುತ್ತಾರೆ, “ಹೇ ಸ್ವಾಮಿಯೆ ನಮಗೆ ನಿಮ್ಮ ಬಾಲ ಲೀಲೆಯನ್ನು ಕಾಣುವ ಬಯಕೆಯನ್ನು ಪೂರೈಸು”, ಎಂದಾಗ ಮಂಗಳವಾರದ ದಿವಸ ಹಸುಗೂಸಾಗಿ ತೊಟ್ಟಿಲಲ್ಲಿ ಗೋಚರವಾದರು. ನಂತರ ನಾಮಕರಣವಾಯಿತು, ಸ್ವಾಮಿಗೆ “ಚಿದಂಬರ” ಎಂಬ ನಾಮವನ್ನು ಇಟ್ಟರು.


ಚಿದಂಬರ ಸ್ವಾಮಿಯ ಬಾಲಲೀಲೆಯ ಆನಂದದ ಸಮಯದ ಮಧ್ಯದಲ್ಲಿ ಮಾರ್ತಾಂಡ ದೀಕ್ಷೀತರಿಗೆ, ಸ್ವಯಂಪ್ರಕಾಶ ಗುರುಗಳು ಹೇಳಿದ ಮಾತುಗಳು ನೆನಪಿಗೆ ಬಂದವು. ಅದೇ ದಿನ ಸ್ವಪ್ನ-ದೃಷ್ಠಾಂತದಲ್ಲಿಸುಂದರವಾದಂತಹ ಅರುಣತಟಾಕ ಕ್ಷೇತ್ರ ಗೋಚರವಾಗುತ್ತದೆ. ಆಗ ಮಾರ್ತಾಂಡ ದೀಕ್ಷೀತರು, ಮುರಗೋಡದ ಉತ್ತರ ದಿಕ್ಕಿಗೆ ಬಂದು ಈ ಸುಂದರವಾದ ದಟ್ಟ ಅರಣ್ಯದ ಮಧ್ಯದಲ್ಲಿ ಈ ಕ್ಷೇತ್ರವನ್ನು ಕಂಡು, ಇದೇ ಸಾಧನೆಗೆ ಸೂಕ್ತವಾದ ಸ್ಥಳ ಎಂದು ಗುರುತಿಸಿ, ಅಲ್ಲಿ ಒಂದು ಘಟನೆಯನ್ನು ಗಮನಿಸುತ್ತಾರೆ, ಅದೇನೆಂದರೆ, ಅಲ್ಲಿ ಒಂದು ಅಶ್ವಥ ವೃಕ್ಷದ ಕೆಳಗೆಪಂಚಭುಜಂಗವೊಂದು, ಮಂಡುಕದ ಮರಿಗಳನ್ನು ರಕ್ಷಿಸುವುದನ್ನು ಕಂಡು, ಇದು ಸಾಮಾನ್ಯವಾದ ಸ್ಥಳವಲ್ಲ, ಇದು ಮುಂದೆ ಮಹಿಮಾ ಸ್ಥಾನವಾಗುದುದೆಂಬ ದೂರದೃಷ್ಠಿಯಿಂದ, ಅಲ್ಲಿ ಖಾಯಂಆಗಿ ನೆಲೆಊರಲು ಆ ಸ್ಥಾನವನ್ನು ಅಂದರೆ 15 ಎಕರೆ ಜಾಗವನ್ನು 90 ರಜತ ನಾಣ್ಯಗಳನ್ನು ಕೊಟ್ಟು ಕೊಂಡು ಕೊಂಡರು. ಮತು 1685 ರಲ್ಲಿ ಗುರು ಪೂರ್ಣಿಮೆಯ ದಿವಸ ದತ್ತ ಪಾದುಕಾ ಹಾಗು ಸ್ವಯಂ ಪ್ರಕಾಶ ಗುರುಗಳ ಪಾದುಕಾ ಸ್ಥಾಪನೆ ಮಾಡಿದರು. ಕ್ರಮೇಣ ಅಲ್ಲಿ ಕೆರೆ ಸ್ಥಾಪನೆ ಮಾಡಿದರು, ಅಲ್ಲಿ ನೀರು ಕೆಂಪಾಗಿದ್ದುದರಿಂದ ಅದಕ್ಕೆ, “ಕೆಂಗೇರಿ” ಯಂದು ನಾಮಾಭೀದಾನವಾಯಿತು. ನಂತರ ಅಲ್ಲಿ ಕೆಂಗೇರಿ ಮಠ, ಮನೆಯೊಂದನ್ನು ಸ್ಥಾಪನೆ ಮಾಡಿದರು. 1 ವರ್ಷದ ನಂತರ ಮಾರ್ತಾಂಡ ದೀಕ್ಷೀತರಿಗೆ ಶೇಷಸಂಭೂತ ಪ್ರಭಾಕರನೆಂಬ ಪುತ್ರನು ಜನಿಸಿದನು. ಶೇಷಾ ಯೆಂಬ ಪುತ್ರಿಯು ಜನಿಸಿದಳು.


ಕೆಲವು ವರ್ಷಗಳ ನಂತರ ಚಿದಂಬರ ಮಹಾಸ್ವಾಮಿಯ ಮತ್ತು ಪ್ರಭಾಕರರ ಜೊತಗೆ 100 ವಟುಗಳ ಧರ್ಮೋಪನಯನ ವಾಗುತ್ತದೆ. ತದನಂತರ ಚಿದಂಬರ ಮಹಾಸ್ವಾಮಿಗಳು, ಅನೇಕ ಬಾಲ ಲೀಲೆಗಳನ್ನ ಮಾಡುತ್ತ ಪ್ರೌಢಾವಸ್ಥೆಗೆ ಬಂದಾಗ ಪಾರ್ವತಿ ಅವತಾರವಾದಂತಹ ಲಿಂಗೋಪಂಥರ ಸುಪುತ್ರಿ ಸರಸ್ವತಿ, ಚಿಕ್ಕ ಶಿಳ್ಳಿಕೇರಿಯ ಮಣ್ಣಿಗಿರಿ, ಬಿಷ್ಠೆಶ್ವರರ ಸುಪುತ್ರಿ ಗಂಗಾ ಅವತಾರ ವದಂತಹ ಸಾವಿತ್ರಿ ಇವರೊಡನೆ ಶುಭವಿವಾಹ ಜರುಗಿತು. ಚಿದಂಬರ ಮಹಾಸ್ವಾಮಿಯ ಸಂಸಾರಚ ಸನಾತನ ಹಿಂದು ಪರಂಪರೆಗೆ ಅನುಸಾರವಾಗಿ ಸಾಗಿತು. ತದನಂತರ ಸರಸ್ವತಿ ಮಾತೆಯ ಉದರದಿಂದ ದಿವಾಕರ ದೀಕ್ಷಿತರು, ಶಂಕರ ದೀಕ್ಷಿತರು, ಮೃತ್ಯುಂಜಯ ದೀಕ್ಷಿತರು, ಬಾಪು ದೀಕ್ಷಿತರು ಜನಿಸುತ್ತಾರೆ, ಮತ್ತು ಸಾವಿತ್ರಿ ಮಾತೆಯ ಉದರದಿಂದ ಕಾಶಿನಾಥ ದೀಕ್ಷಿತರು ಹಾಗೂ ಭಾಸ್ಕರ ದೀಕ್ಷಿತರು, ಜನಿಸುತ್ತಾರೆ.


ಎಲ್ಲರು ತಮ್ಮ ಬಾಲ್ಯಾವಸ್ಥೆಯನ್ನು ಕಳೆದನಂತರ ಸನಾತನ ಹಿಂದು-ವ್ಯೆದಿಕ ಪರಂಪರೆ ಅನುಸಾರ ಚಿದಂಬರ ಮಹಾಸ್ವಾಮಿಗಳು, ದಿವಾಕರ ದೀಕ್ಷಿತರಿಗೆ ಶುಕ್ಲ ಯಜುರ್ವೇದ ಸಂಸ್ಕಾರ, ಶಂಕರ ದೀಕ್ಷಿತರಿಗೆ ಋಗ್ವೇದ ಸಂಸ್ಕಾರ, ಮೃತ್ಯುಂಜಯ ದೀಕ್ಷಿತರಿಗೆ ಸಾಮವೇದ ಸಂಸ್ಕಾರ, ಬಾಪು ದೀಕ್ಷಿತರಿಗೆ ಅಥರ್ವವೇದ ಸಂಸ್ಕಾರ,ಕಾಶಿನಾಥ ಹಾಗು ಭಾಸ್ಕರ ದೀಕ್ಷಿತರಿಗೆ ಕೃಷ್ಣಯಜುರ್ವೇದ ಸಂಸ್ಕಾರ ಕೊಡಿಸಿದರು. ಇದರಿಂದ ಸನಾತನ ಹಿಂದೂ ಧರ್ಮದಡಿಯಲ್ಲಿ ವಿಪ್ರ ಸಮಾಜವು ಒಗ್ಗಟ್ಟಾಗಿರಲಿ ಎಂಬುದೇ ಈ ಸಂಸ್ಕಾರಗಳ ಸಾರ ಮತ್ತು ಉದ್ದೇಶವಾಗಿತ್ತು.


ಮಾರ್ತಾಂಡ ದೀಕ್ಷಿತರು ವೈದಿಕ ಸಂಪ್ರದಾಯಕ್ಕೆ ಸಂಬಂಧಿಸಿದ ಅನೇಕ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ರಚಿಸಿದರು, ಅವುಗಳಲ್ಲಿ “ಶಾಂತಿ ಮಾರ್ತಾಂಡ”, “ವೈದಿಕ ಸಂಪ್ರದಾಯ”, “ಸೇವಾ ಸಮರ್ಥ”, “ಕ್ಷೇತ್ರ ಮತ್ತು ಬ್ರಾಹ್ಮಣ” ಎಂಬಂತ ಹತ್ತು ಹಲವಾರು ಕೃತಿಗಳು ಅವರ ಆಶೀರ್ವಾದಗಳು.


ಶ. 1705 ರಲ್ಲಿ ಲಕ್ಷ್ಮೀ ಮಾತೆಯವರು ದೇಹ ತ್ಯಾಗ ಮಾಡುತ್ತಾರೆ, ಅದೇ ಸ್ಥಾನದಲ್ಲಿ ಚಿದಂಬರ ಮಹಾಸ್ವಾಮಿಗಳು, ಲಕ್ಷ್ಮೀ ಮಾತೆಯವರ ದೇವಸ್ಥಾನ ಸ್ಥಾಪನೆ ಮಾಡುತ್ತಾರೆ. ಅದೇ ರೀತಿ ಮಾರ್ತಾಂಡ ದೀಕ್ಷಿತರು ತಮ್ಮ ಸಂಪೂರ್ಣತೆಯನ್ನು ಅನುಭವಿಸಿ, ಭಗವಂತನಲ್ಲಿ ಮುಕ್ತಿ ಬಯಸಿ, 1706 ರ ಜ್ಯೇಷ್ಠ ವದ್ಯ ನವಮಿಯೆಂದು, ತಮ್ಮ ದೇಹ ತ್ಯಾಗ ಮಾಡಿದರು. ಅದೇ ಸ್ಥಾನದಲಿ ಔದುಂಬರ ವೃಕ್ಷ ಉದ್ಭವಗೊಂಡವು, ಚಿದಂಬರ ಮಹಾಸ್ವಾಮಿಗಳು ಔದುಂಬರ ವೃಕ್ಷವನ್ನು ಪಾರಮಾರ್ಥಿಕ ಮಹತ್ವ, ಔಷಧ ಪೂರ್ಣ ಅಂತರ ಅರ್ಥ,ಪುರಾತನ ಗುರುಮೂಲ ಸಂಪ್ರದಾಯ ಮತ್ತು ಪರಂಪರೆ ಎಂದು ಉಲ್ಲೇಖಿಸಿದ್ದಾರೆ. ಲಕ್ಷ್ಮೀ ಮಾತಾ, ಪಿತೃಗಳು, ಗುರುಗಳಾದ ಮಾರ್ತಾಂಡ ದೀಕ್ಷಿತರು ಹಾಗು ಉದ್ಭವರೂಪ, ಪವಿತ್ರ ಔದುಂಬರ ವೃಕ್ಷವೇ ಪ್ರತ್ಯಕ್ಷ್ಯ ಗುರುಸ್ವರೂಪ.